ಸಾರ್ವಜನಿಕ ನ್ಯಾಯದ ಮೂರನೆಯ ಭಾಗ ಕಾಯಿದೆಗಳು. ಕಾಯಿದೆಗಳನ್ನು ಮಾಡುವ ಅಧಿಕಾರ ಪಾರ್ಲಿಮೆಂಟಿನದು ಅಥವಾ ಅದರಿಂದ ಅಧಿಕಾರ ಹೊಂದಿದವರದು. ಇಂಥ ಕಾಯಿದೆಗಳು. ನೂರಾರು ಇವೆ. ಹೆಚ್ಚಿನ ಕಾಯಿದೆಗಳು ಸಾರ್ವಜನಿಕ. ವ್ಯಕ್ತಿ ವ್ಯಕ್ತಿಯ ಸಂಬಂಧದ ಕಾಯಿದೆ (ಪ್ರೈವೇಟ್) ಬಹಳ ಕಡಿಮೆ. ಒಂದನೆಯ ಎಡ್ವರ್ಡನ ಕಾಲದಲ್ಲಿ ಈ ಎರಡು ವಿಭಾಗಗಳಲ್ಲೂ ಕಾಯಿದೆಗಳು ಬಂದುವು. ಬಳಿಕ ಹೆಚ್ಚಿನಮಟ್ಟಿನ ಕಾಯಿದೆಗಳಿಗೆ ರೂಪು ಕೊಡುವ ಕೆಲಸ ನ್ಯಾಯಾಧೀಶರದ್ದಾಗಿತ್ತೆಂದು ಹೇಳಬಹುದು. ನಾಲ್ಕನೆಯ ವಿಲಿಯಂ ದೊರೆಯ ಕಾಲದಲ್ಲಿ ಖಾಸಗಿ ನ್ಯಾಯಕ್ಕೆ ಸಂಬಂಧಿಸಿದ ಅನೇಕ ಕಾಯಿದೆಗಳು ರೂಪು ಪಡೆದುವು. 19ನೆಯ ಶತಮಾನದಲ್ಲಿ ಹೆಚ್ಚಿನ ಕ್ರಿಮಿನಲ್ ಕಾನೂನುಗಳು ಕಾಯಿದೆಗಳ ರೂಪ ಹೊಂದಿದುವು. ಈಗ ಇಂಗ್ಲಿಷ್ ನ್ಯಾಯದ ಬಹಳಷ್ಟು ಅಂಶ ಕಾಯಿದೆಗಳಲ್ಲಿ ಕ್ರೋಡೀಕೃತವಾಗಿದೆ. ಮೆಕ್ಲೀನ್ ಕ್ರೋಡೀಕರಿಸಿದ ಕಾಯಿದೆಗಳ ಪ್ರಥಮ ಸಂಕಲನ 1484ರಲ್ಲಿ ಬೆಳಕು ಕಂಡಿತು. ಬಳಿಕ ಅನೇಕ ಕ್ರೋಡೀಕರಣಗಳು ಬಂದಿವೆ. 1951ರಲ್ಲಿ ಬ್ರಿಟನ್ನಿನ ಕಾಯಿದೆಗಳು ಸ್ಟಾಚ್ಯೂಟ್ಸ್ ರಿವೈಸ್ಡ್ ಎಂಬ ಹೆಸರಿನಿಂದ ಅನೇಕ ಸಂಪುಟಗಳಲ್ಲಿ 1951ರಲ್ಲಿ ಅಚ್ಚಾಗಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ